ನಳ್ಳಿ ಜೇಡ -
ಸಂದಿಪದಿ ವಂಶದ ಅರ್ಯಾಕ್ನಿಡ ವರ್ಗದ ತೋಮಿಸಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಜೇಡಗಳ ಸಾಮಾನ್ಯ ಹೆಸರು (ಕ್ರ್ಯಾಬ್‍ಸ್ಪೈಡರ್). ಇವುಗಳ ಶಿರೋಕ್ಷದ ಇಕ್ಕೆಡೆಗಳಿಗೂ ಪ್ರಸರಿಸಿರುವ ಕಾಲುಗಳಿಂದಾಗಿ ಇವು ನೈಜ ನಳ್ಳಿಗಳಂತೆ ನಡೆಯುತ್ತವೆ. ಆದ್ದರಿಂದಲೇ ಇವಕ್ಕೆ ಈ ಹೆಸರು ಬಂದಿದೆ. ಪ್ರಪಂಚಾದ್ಯಂತ ವ್ಯಾಪಿಸಿರುವ ಇವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ವಿವರಿಸಲಾಗಿದೆ. ತೋಮಿಸಿನೀ ಉಪಕುಟುಂಬಕ್ಕೆ ಸೇರಿದ ಕ್ಸೆಸ್ಟಿಕಸ್ ಕ್ರಿಸ್ಟೇಟಸ್ ಎಂಬ ಪ್ರಭೇದ ಹುಲ್ಲು ಮತ್ತು ಪೈರು ಪಚ್ಚೆಗಳಿರುವಲ್ಲಿ ವಾಸಿಸುವುದು. ಶರತ್ಕಾಲದಲ್ಲಿ ಇದರ ಮರಿಗಳು ಕಬ್ಬಿಣದ ಕಂಬಿಗಳ ಮೇಲೂ ಕಂಡುಬರುವುದುಂಟು. ಇದರ ಸಂಬಂಧಿಯಾದ ಮಿಸುಮೇನ ವ್ಯಾಟಿಯ ಎಂಬುದು ಸುಂದರ ರೂಪಿ. ಹೆಣ್ಣಿನ ಉದರದ ಬಣ್ಣ ಹಳದಿ ಅಥವಾ ಹಸುರು. ಇದರ ಮೇಲೆ ಒಂದು ಜೊತೆ ಹೊಳೆಯುವ ಕೆಂಪು ಪಟ್ಟಿಗಳಿವೆ. ಗಂಡುಗಳ ಬಣ್ಣ ಕಪ್ಪು. ಇದು ಮರ ಅಥವಾ ಪೊದೆವಾಸಿ. ಈ ಗುಂಪಿನ ಇನ್ನೊಂದು ಸದಸ್ಯ ಡಯೆಯಿಯ ಡಾರ್ಸೆಟ ಎಂಬುದು ಇಂಗ್ಲೆಂಡಿನ ಅಂದವಾದ ಜೇಡಗಳಲ್ಲಿ ಒಂದು. ತಿಳಿಹಸುರು ಬಣ್ಣದ ಕಾಲು ಹಾಗೂ ಶಿರೋಕ್ಷ ಮತ್ತು ನಸುಗೆಂಪು ಗುರುತುಳ್ಳ ಹಳದಿ ವರ್ಣದ ಉದರ ಇದರ ಅಂದಕ್ಕೆ ಕಾರಣ.

ಫಿಲೋಡ್ರೋಮಿನೀ ಉಪಕುಟುಂಬಕ್ಕೆ ಸೇರಿದ ಫಿಲೋಡ್ರೋಮಸ್ ಮಾಗ್ರ್ಯಾರಿಟೇಟಸ್ ಎಂಬ ಜೇಡ ಕೀಟಗಳನ್ನು ಕಬಳಿಸಲು ನಸುನೀಲಿಯ ಶಿಲಾವಲ್ಕದ ರೂಪದಲ್ಲಿ ರೆಂಬೆಗಳ ಮೇಲೆ ಕಾದು ಕುಳಿತಿರುತ್ತದೆ. ಸಮಶೀತೋಷ್ಣವಲಯದಲ್ಲಿ ವಾಸಿಸುವ ಟೈಬೆಲಸ್ ಆಬ್ಲಾಂಗಸ್ ಎಂಬ ಇನ್ನೊಂದು ಜೇಡದ ಮೈಬಣ್ಣ ತಿಳಿಹಳದಿ; ಪ್ರಾಣಾಪಾಯದ ವೇಳೆಯಲ್ಲಿ ಇದು ಕಾಲುಗಳಿಂದ ಕಾಂಡವನ್ನು ಸುತ್ತುಗಟ್ಟಿ ಗಿಡಕ್ಕೆ ಅಂಟಿಕೊಂಡು ಅಚಲಿಯಾಗುತ್ತದೆ. ಸ್ಪಾರಾಸ್ಸಿನೀ ಉಪಕುಟುಂಬಕ್ಕೆ ಸೇರಿದ ಸುಮಾರು 40 ಬಗೆಯ ಜೇಡಗಳಲ್ಲಿ ಕೆಲವು ಬಯಲು ವಾಸಿಗಳು. ಅನೇಕ ಜೀವಿಗಳು ಸಸ್ಯೋದ್ಯಾನ ಮತ್ತು ಗಾಜಿನ ಮನೆಗಳನ್ನೂ ಪ್ರವೇಶಿಸುವುದುಂಟು. ಅಮೆರಿಕದಲ್ಲಿ ಮಾತ್ರ ಕಾಣಬರುವ ಅಫ್ಯಾಂಟೊಕಿಲಿನೀ ಉಪಕುಟುಂಬಕ್ಕೆ ಸೇರಿದ ಎರಡು ಬಗೆಯ ಜೇಡಗಳು ಇರುವೆಗಳನ್ನು ಅನುಕರಿಸಿ ಜೀವಿಸುವುವು.

ಸ್ಟಿಫ್ಯಾನೋಪ್ಸಿನೀ ಉಪಕುಟುಂಬದ ಜೀವಿಗಳು ಆಸ್ಟ್ರೇಲಿಯ, ಆಫ್ರಿಕ, ಜಾವ ಮತ್ತು ಸುಮಾತ್ರಗಳಲ್ಲಿ ಹೇರಳ. ಈ ಗುಂಪಿನ 16 ಜಾತಿಯ ಜೇಡಗಳಲ್ಲಿ ಫ್ರೈನಾರಕ್ನೆ ಡೆಸಿಪಿಯನ್ಸ್ ಎಂಬುದು ಅನುಕರಣೆಯಲ್ಲಿ ಅದ್ವಿತೀಯವೆನಿಸಿದೆ; ಎಲೆಯ ಮೇಲೆ ತಾನೇ ನೇಯ್ದ ಬಲೆಯ ಮಧ್ಯೆ ಅಂಗಾತ ಪವಡಿಸಿ ಎದೆಯ ಮೇಲೆ ಕಾಲುಗಳನ್ನು ಮಡಿಸಿಕೊಂಡು ಕೀಟಗಳಿಗಾಗಿ ಕಾಯುವುದು. ಈ ಸ್ಥಿತಿಯಲ್ಲಿ ಜೇಡವು ಪಕ್ಷಿಗಳ ಹಿಕ್ಕೆಯಂತೆ ಕಾಣುವುದರಿಂದ ಕೀಟಗಳು ಮೋಸಕ್ಕೊಳಗಾಗಿ ಬಲಿಯಾಗುತ್ತವೆ. ಸೆಲೆನೋಪಿನೀ ಗುಂಪಿಗೆ ಸೇರಿದ ಸೆಲೆನೋಪ್ಸ್ ಎಂಬ ಒಂದೇ ಒಂದು ಜಾತಿಯ ಜೇಡ ಉಷ್ಣವಲಯವಾಸಿ. ಇದರ ಗುರುತರ ಗಾತ್ರ, ಚಪ್ಪಟೆಯಾದ ದೇಹ ಮತ್ತು ಕಣ್ಣುಗಳ ವಿಚಿತ್ರ ಜೋಡಣೆಯಿಂದಾಗಿ ಇದನ್ನು ಸುಲಭವಾಗಿ ಗುರುತಿಸಬಹುದು. ಈ ಜಾತಿಯ 12 ಪ್ರಭೇದಗಳಲ್ಲೂ ಅಷ್ಟಾಕ್ಷಿಗಳು ಒಂದೇ ಸಾಲಿನಲ್ಲಿ ದೇಹಕ್ಕೆ ಜೋಡಣೆಗೊಂಡಿವೆ.	
(ಎಸ್.ಎಚ್‍ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ